Friday, April 12, 2013

ನಿಯಮ ಉಲ್ಲಂಘಿಸಿದರೆ ಐಪಿಸಿ 188 ದಾಖಲಿಸಿ: ಜಿಲ್ಲಾಧಿಕಾರಿ

ಮಂಗಳೂರು,ಏಪ್ರಿಲ್.12: ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳೇ ನಮ್ಮ ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅವರ ಹೊಣೆಯನ್ನು ನಿರ್ವಹಿಸಲಿದ್ದು, ನಿಮ್ಮ ಆದೇಶಗಳನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188 ನಡಿ ಕ್ರಮ ತೆಗೆದುಕೊಳ್ಳಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಹೇಳಿದರು.
            ಇಂದು ಮಂಗಳೂರು ಮಹಾನಗರಪಾಲಿಕೆಯ ಮಂಗಳ ಸಭಾಂಗಣದಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟ್ ಮತ್ತು ರಿಟರ್ನಿಂಗ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಿಲ್ಲಾಧಿಕಾರಿಗಳು, ಮೇಲಿನಿಂದ ಕೆಳಹಂತದವರೆಗೆ ಸಂವಹನ ಕೊರತೆ ಸಂಭವಿಸಬಾರದು ಎಂದು ಸ್ಪಷ್ಟಪಡಿಸಿದರು. ವಾಹನಗಳನ್ನು ಬಳಸುವ ಬಗ್ಗೆ, ಹೋಟೆಲ್ ಅಥವಾ ಕೇಟರಿಂಗ್ ಗಳಿಂದ ಊಟ ಸರಬರಾಜು ಮಾಡುವ ಬಗ್ಗೆ, ಶಾಮಿಯಾನ ಹಾಕಲೂ ಸಹಿತ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಯಾವುದೇ ರ್ಯಾಲಿಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅಬಕಾರಿ ಇಲಾಖೆ ಅಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಜಾಗೃತಿಯಿಂದ ಕೆಲಸ ಮಾಡಬೇಕಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಮನಿಶ್ ಕರ್ಬಿಕರ್ ಅವರು ಸ್ಟ್ಯಾಟಿಕ್ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಹಾಗೂ ಯಾವುದೇ ರೀತಿಯ ಸಂಶಯಾಸ್ಪದ ಘಟನೆಗಳು ನಡೆಯುವ ಬಗ್ಗೆ ಮಾಹಿತಿ ಲಭ್ಯವಾದರೆ ಅದನ್ನು ವಿಡಿಯೋ ಚಿತ್ರೀಕರಣ ಮಾಡುವ ಬಗ್ಗ ನಿರ್ದೇಶನ ನೀಡಿದರು.
ರಿಟರ್ನಿಂಗ್ ಅಧಿಕಾರಿಗಳು, ಸೆಕ್ಟರ್ ಮ್ಯಾಜಿಸ್ಟ್ರೇಟ್ ಗಳು ತಮ್ಮ ವ್ಯಾಪ್ತಿಯ ಇನ್ಸ್ ಪೆಕ್ಟರ್ ಗಳ ಜೊತೆ ಸಂಪರ್ಕವಿರಿಸಿ ಚುನಾವಣಾ ನೀತಿ ಸಂಹಿತ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ರೀತಿಯ ಉದಾಸೀನ ಮಾಡದೆ ಕಾರ್ಯೋನ್ಮುಖರಾಗಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.
ಜಿಲ್ಲೆಗೆ ಚುನಾವಣಾ ಖರ್ಚು ವೆಚ್ಚ ವೀಕ್ಷಕರ ಆಗಮನ
ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣಾ ಖರ್ಚು ವೆಚ್ಚ ವೀಕ್ಷಕರಾಗಿ ಬೆಳ್ತಂಗಡಿ, ಮೂಡಬಿದರೆ, ಪುತ್ತೂರು, ಸುಳ್ಯ ಕ್ಷೇತ್ರಗಳಿಗೆ  ವಿನೀಷ್ ಚೌಧರಿ (9483506411),
vinish.chaudhary@gmail.com ಮಂಗಳೂರು -204, 205 ಬಂಟ್ವಾಳಕ್ಕೆ ಆರ್. ಕೆ ಅಗರ್ವಾಲ್,
(agrawalRK@cag.gov.in). . 202 ಮಂಗಳೂರು ಸಿಟಿ ನಾರ್ತ್, 203 ಮಂಗಳೂರು ಸಿಟಿ ಸೌತ್ ಮೊಹಮ್ಮದ್ ಶಂಶಾದ್ ಆಲಂ (9483506399) 
shamshadirs@gmail.com ಇವರು ಆಗಮಿಸಿರುತ್ತಾರೆ.

Daily Report on Violation Of Model Code of Conduct and Excise Related Cases

VIEW

ಚುನಾವಣಾ ನಾಮಪತ್ರ ಸಲ್ಲಿಕೆ: ಪಾಲಿಸಬೇಕಾದ ನಿಯಮಗಳು

ಮಂಗಳೂರು, ಎಪ್ರಿಲ್. 12:- ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013 ಅಧಿಸೂಚನೆ ಈಗಾಗಲೇ ಪ್ರಕಟವಾಗಿದ್ದು,ನಾಮಪತ್ರ ಸ್ವೀಕಾರ ಆರಂಭವಾಗಿರುತ್ತದೆ.ನಾಮಪತ್ರ ನೀಡಲು ಚುನಾವಣಾಧಿಕಾರಿ ಕಚೇರಿಗೆ ಅಭ್ಯರ್ಥಿ ತೆರಳುವ ಸಮಯದಲ್ಲಿ ಮೆರವಣಿಗೆಯ ಮೂಲಕ ಬೆಂಬಲಿಗರೊಂದಿಗೆ ಸಾಗಿ ನಾಮಪತ್ರ ನೀಡುವುದನ್ನು ಕಳೆದ ಎಲ್ಲಾ ಚುನಾವಣೆಗಳಲ್ಲಿ ಗಮನಿಸಲಾಗಿದ್ದು,ಈ ಕುರಿತು ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸಿರುವ ಎಲ್ಲಾ ನಿರ್ದೇಶನಗಳನ್ನು ಚುನಾವಣಾಧಿಕಾರಿ ಮತ್ತು ಅಭ್ಯರ್ಥಿ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಬೇಕಾದ ಚುನಾವಣಾಧಿಕಾರಿ ಪಾಲಿಸಬೇಕಾದ ನಿಯಮಗಳ ಕುರಿತು ಮಗದೊಮ್ಮೆ ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ನಾಮಪತ್ರ ಸಲ್ಲಿಸುವ ವ್ಯಕ್ತಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ನಾಮಪತ್ರ ನೀಡಲು ಇಚ್ಚಿಸಿದಲ್ಲಿ ಮೆರವಣಿಗೆಗೆ ಅನುಮತಿ ಚುನಾವಣಾಧಿಕಾರಿಯಿಂದ ಕಡ್ಡಾಯವಾಗಿ ಪಡೆಯತಕ್ಕದ್ದು. ಇಂತಹ ಲಿಖಿತ ಕೋರಿಕೆ ಬಂದ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಡ್ಡಾಯವಾಗಿ ಪೋಲೀಸ್ ಇಲಾಖೆಯ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸತಕ್ಕದ್ದು.
ಪೋಲೀಸ್ ಇಲಾಖೆಯ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸಿದ ನಂತರ ಮೆರವಣಿಗೆಗೆ ಅನುಮತಿ ನೀಡಬಹುದೆಂದು ಅಭಿಪ್ರಾಯ ಪಟ್ಟಲ್ಲಿ,ಮೆರವಣಿಗೆಗೆ ಶರ್ತಬದ್ಧ ಅನುಮತಿ ನೀಡುವುದು.ಮೆರವಣಿಗೆ ಅನುಮತಿ ನಿರಾಕರಿಸಲು ಸಕಾರಣ ಇದೆ ಎಂದು ಕಂಡು ಬಂದಲ್ಲಿ ಸಕಾರಣದೊಂದಿಗೆ ಅನುಮತಿ ನಿರಾಕರಿಸುವುದು.ಈ ರೀತಿ ಹಿಂಬರಹ ನೀಡುವ ಮೊದಲು ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚ ನಡೆಸಿ ಅವರ ನಿರ್ದೇಶನ ಪಡೆಯುವುದು.
ಲಿಖಿತ ಕೋರಿಕೆಯಲ್ಲಿ ಅರ್ಜಿದಾರರು ಮೆರವಣಿಗೆಯ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ನೀಡತಕ್ಕದ್ದು. ಭಾಗವಹಿಸುವ ಬೆಂಬಲಿಗರು ವಾಹನ ಮೆರವಣಿಗೆ ಸಾಗುವ ದಾರಿ,ಸಮಯ ಮತ್ತು ಉಪಯೋಗಿಸುವ ಇತರೆ ವಸ್ತುಗಳು ಹಾಗೂ ಎಲ್ಲಾ ಶರ್ತಗಳನ್ನು ಕಡ್ಡಾಯವಾಗಿ ಪಾಲಿಸುವ ದೃಢೀಕರಣ ಪತ್ರವನ್ನು ಅರ್ಜಿದಾರರು ನೀಡತಕ್ಕದ್ದು.
 ಅರ್ಜಿಯನ್ನು ವಿಲೇಗೊಳಿಸುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಅಭಿಪ್ರಾಯ ಕಡ್ಡಾಯವಾಗಿ ಪಡೆಯುವುದು. ಇಲಾಖೆಯ ಎಲ್ಲಾ ಸಲಹೆ ಸೂಚನೆಯನ್ನು ಗಣನೆಗೆ ತೆಗೆದುಕೊಳ್ಳುವುದು.
ಮೆರವಣಿಗೆ ಸಾಗುವ ದಾರಿ,ಸಮಯ,ರಸ್ತೆಯ ಅಗಲ ಮತ್ತು ಸಾರ್ವಜನಿಕ ಸುಗಮ ಸಂಚಾರಕ್ಕೆ ಧಕ್ಕೆ ಬರುವ ಕುರಿತು ಪೋಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು.ಯಾವುದೇ ಕಾರಣಕ್ಕೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು.ಸುಗಮ ಸಂಚಾರಕ್ಕೆ ಧಕ್ಕೆಯಾಗದಂತೆ ಯಾವುದೇ ರಾಜಿ ಮಾಡಿಕೊಳ್ಳದೇ ತೀರ್ಮಾನ ಕೈಗೊಳ್ಳುವುದು ಮತ್ತು ವಿವೇಚನಾಯುಕ್ತವಾಗಿ ತೀರ್ಮಾನ ಕೈಗೊಳ್ಳುವುದು ಚುನಾವಣಾಧಿಕಾರಿಯವರ ಆದ್ಯ ಕರ್ತವ್ಯವಾಗಿರುತ್ತದೆ.
ಅನುಮತಿ ನೀಡುವಾಗ ಮೆರವಣಿಗೆಯಲ್ಲಿ ಸಾಗುವ ಜನ ಮತ್ತು ವಾಹನ ಪಾಲಿಸಬೇಕಾದ ರೀತಿ,ನೀತಿ,ನಿಯಮದ ಕುರಿತು ಸ್ಪಷ್ಟವಾದ ಶರ್ತ ವಿಧಿಸುವುದು.
ಪ್ರತೀ 100 ಮೀಟರ್ ಅಂತರದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಒಂದು ಬ್ರೇಕ್ ನೀಡಬೇಕು. ಈ ಅಂತರದಲ್ಲಿ ಮೆರವಣಿಗೆಯಲ್ಲಿ ಕೇವಲ ಮೂರು ವಾಹನಗಳಿಗೆ ಮಾತ್ರ ಅವಕಾಶವಿರುವುದು.ಅಂದರೆ ಪ್ರತೀ 100 ಮೀಟರ್ ನಂತರ ಒಂದು ಗ್ಯಾಪ್ ನೀಡಬೇಕು. ಭಾಗವಹಿಸುವ ವಾಹನಕ್ಕೆ ಚುನಾವಣಾಧಿಕಾರಿಯವರಿಂದ ಅನುಮತಿ ಪಡೆಯಬೇಕು.
ವಾಹನಕ್ಕೆ ಧ್ವನಿವರ್ಧಕ  ಅಳವಡಿಸಿ ಸಂಚರಿಸಲು  ಅವಕಾಶವಿರುವುದಿಲ್ಲ.ಧ್ವನಿವರ್ಧಕ ಬಳಸುವ ನಿರ್ಧಿಷ್ಟ ಸ್ಥಳಗಳ ಕುರಿತು ಮೊದಲೇ ಮಾಹಿತಿ ನೀಡಿ ಅನುಮತಿ ಪಡೆಯಬೇಕು.
ಬಾವುಟಗಳನ್ನು ಜನರು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶಿಸಬಹುದು.ಆದರೆ ವಾಹನಕ್ಕೆ ಕಟ್ಟಿ ಪ್ರದರ್ಶಿಸಲು ಅವಕಾಶವಿರುವುದಿಲ್ಲ.ಟೀಶರ್ಟ್,ಟೋಪಿ ಮತ್ತು ಶಾಲುಗಳಲ್ಲಿ ಪಕ್ಷದ ಚಿಹ್ನೆ,ಅಭ್ಯರ್ಥಿಯ ಭಾವಚಿತ್ರ ಹಾಗೂ ಇತರೆ ಪ್ರಚಾರದ ವಿಷಯಗಳನ್ನು  ಮುದ್ರಿಸಿ ಪ್ರದರ್ಶಿಸುವಂತಿಲ್ಲ .ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ.
ನೃತ್ಯ,ಬ್ಯಾಂಡ್ ಮೊದಲಾದವುಗಳನ್ನು ಮೆರವಣಿಗೆಯಲ್ಲಿ ಅಳವಡಿಸುವ ಕುರಿತು ಅನುಮತಿ ಕೋರಿದಾಗ ಸದ್ರಿ ವಿಷಯ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಚುನಾವಣಾಧಿಕಾರಿಯವರು ದೃಢೀಕರಿಸಿಕೊಳ್ಳುವುದು.ಶಬ್ದ ಮಾಲಿನ್ಯ ಉಂಟು ಮಾಡುವಂತಹ ವಸ್ತುಗಳನ್ನು ಬಳಸುವಾಗ ಕಾಯಿದೆಯಡಿ ಅವಕಾಶ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಶಬ್ಚ ಉಂಟು ಮಾಡದಂತೆ ಶರ್ತ ವಿಧಿಸುವುದು.
ಇಡೀ ನಗರ ಪ್ರದೇಶದಲ್ಲಿ ಸಂಚರಿಸಿ ನಾಗರೀಕರ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಬಹುದಾಂತಹ ಅತೀ ದೂರ ಕ್ರಮಿಸಬಹುದಾದ ಮೆರವಣಿಗೆಗೆ ಅವಕಾಶ ನೀಡಬಾರದು.
ಒಮ್ಮೆ ಚುನಾವಣಾಧಿಕಾರಿಯವರಿಂದ ಅನುಮತಿ ಪಡೆದ ನಂತರ ಅರ್ಜಿದಾರ ಯಾವುದೇ ಕಾರಣಕ್ಕೂ ಮೆರವಣಿಗೆಯ ದಾರಿ ಮತ್ತು ಸಮಯವನ್ನು ಬದಲಾಯಿಸಬಾರದು.
ಯಾವುದೇ ರೀತಿಯಲ್ಲಿ ಜನರ ಧಾರ್ಮಿಕ ಭಾವನೆ ಕೆರಳಿಸುವ  ಮತ್ತು ಪರಸ್ಪರ ದ್ವೇಷ ಮೂಡಿಸುವ ಹೇಳಿಕೆ, ಭಾಷಣ ಮಾಡದಂತೆ ನಿರ್ಬಂಧ ವಿಧಿಸುವುದು.ಹಣ ಬಲ ಪ್ರದರ್ಶಿಸುವಂತಹ ಮೆರವಣೆಗೆಗೆ ಅವಕಾಶ ನೀಡಬಾರದು ಮತ್ತು ಅಂತಹ ಪ್ರಯತ್ನ ಮಾಡಬಾರದಾಗಿ ಅರ್ಜಿದಾರರಿಗೆ ಸೂಚಿಸುವುದು.
ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗದಂತೆ ಮೆರವಣಿಗೆ ಸಮಯದಲ್ಲಿ ಜಾಗ್ರತೆ ವಹಿಸಲು ಸೂಚಿಸಿದೆ.
ಚುನಾವಣಾಧಿಕಾರಿ ಕಚೇರಿ 100 ಮೀಟರ್ ಅಂತರದಲ್ಲಿ ಚುನಾವಣಾ ಆಯೋಗದ ನಿರ್ದೆಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಿದೆ.
ಎಲ್ಲಾ ಅಭ್ಯರ್ಥಿಗಳಿಗೆ ಒಂದೇ ರೀತಿಯ ಅವಕಾಶ ಕಲ್ಪಿಸಲು ಅನುಕೂಲಕರ ವಾತಾವರಣ ನಿರ್ಮಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಪಾಲಿಸಲು ಚುನಾವಣಾಧಿಕಾರಿ ಪ್ರಯತ್ನಿಸುವುದು.
ಯಾವುದೇ ಅಮಿಷ ಒಡ್ಡದಂತೆ ಕ್ರಮ ವಹಿಸುವುದು ಮತ್ತು ಮೆರವಣಿಗೆಗೆ ಆಹಾರ ವ್ಯವಸ್ಥೆಯನ್ನು ಮಾಡದಂತೆ ನಿರ್ಬಂಧ ವಿಧಿಸುವುದು.
ಕಾಲಕಾಲಕ್ಕೆ ಚುನಾವಣಾ ಆಯೋಗ ನೀಡಿದ ಎಲ್ಲಾ ನಿರ್ದೇಶನಗಳನ್ನು ಚುನಾವಣಾಧಿಕಾರಿ ಪಾಲಿಸಲು ಕ್ರಮ ವಹಿಸುವ ಮೂಲಕ ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಮೆರವಣಿಗೆಯ ಸಂದರ್ಭದಲ್ಲಿ ಆಗುವಂತೆ ನೋಡಿಕೊಳ್ಳುವುದು.ಇದಕ್ಕಾಗಿ ಸೆಕ್ಟರ್ ಮ್ಯಾಜಿಸ್ಟ್ರೇಟ್/ಸೆಕ್ಟರ್ ಆಫೀಸರ್ಸ್ ಮತ್ತು ವಿಡಿಯೋ ಸರ್ವೆಲೆನ್ಸ್ ಟೀಮ್ ಗೆ ಸೂಕ್ತ ನಿರ್ದೇಶನ ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮವಹಿಸದ ಚುನಾವಣಾಧಿಕಾರಿಗಳ ಮೇಲೆ ಶಿಸ್ತು ಕ್ರಮದ ಅನಿವಾರ್ಯತೆ ಉಂಟಾಗದಂತೆ  ಕ್ರಮವಹಿಸಲು ಜಿಲ್ಲಾ ಚುನಾವಣಾಧಿಕಾರಿಗಳು  ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Thursday, April 11, 2013

ಚುನಾವಣಾ ಖರ್ಚು ವೆಚ್ಚ ಉಸ್ತುವಾರಿ- ವಿಡಿಯೋ ಕಾನ್ಫರೆನ್ಸ್

ಮಂಗಳೂರು.ಏಪ್ರಿಲ್.11:ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲರೂ ಈ ಮಾಹಿತಿಯನ್ನು ಚುನಾವಣಾ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಬಗ್ಗೆ ಹಾಗೂ ಚುನಾವಣೆಯನ್ನು ಸ್ವಚ್ಛವಾಗಿ ನಡೆಸುವ ಸಂಬಂಧ ಇಂದು ಚುನಾವಣಾ ಖರ್ಚುವೆಚ್ಚ ಉಸ್ತುವಾರಿ ವಹಿಸಿಕೊಂಡಿರುವ ವಿಶೇಷ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಪೂರ್ವಾಹ್ನ 11ರಿಂದ ಸಂಜೆ 5 ಗಂಟೆವರೆಗೆ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
              ಎಲ್ಲ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಖರ್ಚು ವೆಚ್ಚ ವಹಿಸಿಕೊಂಡಿರುವ ಅಧಿಕಾರಿಗಳಿಗೆ ಸವಿವರ ಮಾಹಿತಿ ನೀಡಿದ ಪಾಂಡೆ ಅವರು, ಕಾನೂನು ಪ್ರಕಾರ ಮಾಡಬಹುದಾದ ಪ್ರಚಾರ ವೆಚ್ಚಗಳು 16 ಲಕ್ಷ ರೂ.ಗಳಿಗೆ ಸೀಮಿತವಾಗಿದ್ದು, ಹಣ ಹಂಚುವುದು, ಉಡುಗೊರೆ ನೀಡುವುದು, ಸಾರಾಯಿ ಹಂಚುವುದು ಇಂತಹ ಯಾವುದೇ ಅಕ್ರಮಗಳಿಗೆ ಚುನಾವಣಾ ಆಯೋಗ ಅವಕಾಶ ನೀಡುವುದಿಲ್ಲ ಎಂದರು.
ಸೆಕ್ಷನ್ 10 ಎ ಪ್ರಕಾರ ಚುನಾವಣಾ ವೆಚ್ಚ ವಿವರವನ್ನು ಕಾಲಮಿತಿಯೊಳಗೆ ನಿಗದಿತ ಮಾದರಿಯಲ್ಲಿ ನೀಡದಿದ್ದರೆ ಚುನಾವಣಾ ಆಯೋಗ ಸೂಕ್ತ ಕ್ರಮಕೈಗೊಳ್ಳಲಿದೆ. ಸೆಕ್ಷನ್ 77, 78, ನಡಿ ಚುನಾವಣಾ ವೆಚ್ಚ ವೀಕ್ಷಣೆ, ಸೆಕ್ಷನ್ 127ಎ ಅಡಿಯಲ್ಲಿ ಮುದ್ರಣ ಸಾಮಗ್ರಿ ಮುದ್ರಕರ ಮಾಹಿತಿ ಇಲ್ಲದೆ ಮುದ್ರಿಸಲ್ಪಡಬಾರದು, ಎಲ್ಲ ಪ್ರಚಾರ ಸಾಮಗ್ರಿಗಳಿಗೆ ಸಂಬಂಧಪಟ್ಟವರಿಂದ ಅನುಮತಿ ಪಡೆಯಬೇಕು ಎಂದು ವಿವರಿಸಿದರು.
ಎಲ್ಲ ವಾಹನಗಳ ತಪಾಸಣೆ ಕಡ್ಡಾಯ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಗೆ ಮೂವರು ಚುನಾವಣಾ ಖರ್ಚು ವೆಚ್ಚ ವೀಕ್ಷಕರು ಆಗಮಿಸಿದ್ದು, ಎಲ್ಲ ಬೆಳವಣಿಗೆಗಳನ್ನು ಗಮನಿಸಲಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ  ಮುಖ್ಯ ಚುನಾವಣಾಧಿಕಾರಿ  ಅನಿಲ್ ಕುಮಾರ್ ಝಾ ಅವರು ಮಾತುಕತೆ ನಡೆಸಿ ಮಾಹಿತಿ ನೀಡಿದರು.

Wednesday, April 10, 2013

ಸದಾಚಾರ ಸಂಹಿತೆ ಉಲ್ಲಂಘನೆ ತಡೆಗೆ ಪ್ಲೈಯಿಂಗ್ ಸ್ಕ್ವಾಡ್ ಗಳು ಸನ್ನದ್ಧ

ಮಂಗಳೂರು ಏಪ್ರಿಲ್ 10: ಏಪ್ರಿಲ್ 10ರಿಂದ ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳು ತಮ್ಮ ಕರ್ತವ್ಯವನ್ನು ಆರಂಭಿಸಿದ್ದು, ಒಂದು ಕ್ಷೇತ್ರದಲ್ಲಿ ಕನಿಷ್ಠ 3 ತಂಡಗಳು ಕಾರ್ಯಾಚರಿಸುತ್ತಿವೆ. ಎಲ್ಲ ತಂಡಗಳು 24 ಗಂಟೆಯೂ ಜಾಗೃತ ಸ್ಥಿತಿಯಲ್ಲಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ನಿರ್ದೇಶನ ನೀಡಿದರು.

ಏಪ್ರಿಲ್ 9 ರಂದು ಮಂಗಳವಾರ  ಸಂಜೆ 7 ಗಂಟೆಯ ವೇಳೆಗೆ ಜಿಲ್ಲೆಯ ಎಲ್ಲ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಜೊತೆ ಆಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಚುನಾವಣಾ ಸದಾಚಾರ ಸಂಹಿತೆ ಉಲ್ಲಂಘನೆ ಕಂಡು ಬಂದರೆ ತಕ್ಷಣ ಕ್ರಮಕೈಗೊಳ್ಳಬೇಕೆಂದರು.
ನಿಮ್ಮ ನಿಮ್ಮ ಕ್ಷೇತ್ರಕ್ಕೆ ಆರ್ ಒ ಕಡೆಯಿಂದ ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡಿ. ಜಿಲ್ಲಾ ವ್ಯಾಪ್ತಿಯದ್ದಾದರೆ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿ ಎಂದರು. ವಾಹನ, ಕೇಟರಿಂಗ್, ಹೋಟೆಲ್ ಗಳನ್ನೊಳಗೊಂಡಂತೆ, ಶಾಮಿಯಾನದವರು ಲೆಕ್ಕಾಚಾರ ಕೊಡಬೇಕು.
ಚೆಕ್ಪೋಸ್ಟ್ನಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳ ವಾಹನವನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು. ಹಾಗೇನಾದರೂ ತಪಾಸಣೆ ಮಾಡದೆ ಸೆಲ್ಯುಟ್ ಹೊಡೆದು ವಾಹನಗಳನ್ನು ಬಿಟ್ಟರೆ ತಕ್ಷಣವೇ ಅಲ್ಲಿರುವ ಸಿಬ್ಬಂದಿಗಳನ್ನು ಅಮಾನತು ಮಾಡಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಜಿಲ್ಲಾಧಿಕಾರಿಗಳು ವಯರರ ಲೆಸ್ ಮೂಲಕ ನೀಡಿದ್ದಾರೆ. 
ಅಬಕಾರಿ ಇಲಾಖೆಯವರು, ಪೋಲಿಸ್ ಸಿಬಂದಿ, ಫ್ಲೈಯಿಂಗ್ ಸ್ಕ್ವಾಡ್ ನಲ್ಲಿದ್ದು, ಬೆಳಗ್ಗೆ ಹಾಲು ಬೂತ್ ಗಳು ಕದ ತೆರೆಯುವ ಮುನ್ನ ಸ್ಥಳಿಯ ಸಣ್ಣ ಗೂಡಂಗಡಿಗಳಲ್ಲಿ ಸಾರಾಯಿ ಪ್ಯಾಕೆಟ್ ವಿತರಣೆಯಾಗುತ್ತಿದ್ದು, ಅದಕ್ಕೆ ಸರತಿ ಸಾಲಿನಲ್ಲಿ ಬೆಳಗ್ಗೆ ಕ್ಯೂ ನಿಲ್ಲುವ ದೃಶ್ಯ ತನ್ನ ಗಮನಕ್ಕೆ ಬಂದಿದೆ. ಇಂತಹ  ಪ್ರಕರಣಗಳ ಬಗ್ಗೆ ನಿಗಾ ಇರಿಸಿ ತಡೆಯುವ ಕ್ರಮವಾಗಬೇಕು ಎಂದರು. ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಸೂಕ್ತ ಆದೇಶಗಳನ್ನು ನೀಡಲಿದ್ದು,  ಸಮರ್ಪಕವಾಗಿ ಪಾಲನೆಯಾಗಬೇಕು. ಆದೇಶಗಳು ಪಾಲನೆಯಾಗದೆ ಉಳಿದರೆ ಕಠಿಣ ಕ್ರಮ ಖಚಿತ ಎಂದರು.
ಎಲ್ಲ ಮಾಹಿತಿಗಳು  1077 ಕಂಟ್ರೋಲ್ ರೂಂಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮತದಾನ ನಮ್ಮ ಹಕ್ಕು

ಮಂಗಳೂರು, ಎಪ್ರಿಲ್. 10:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಮೂರು ಇಲಾಖೆಗಳ ಸಿಬ್ಬಂದಿ ವರ್ಗದವರಿಂದ ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ರತ್ನಾಕರ್ ಇವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.ವಾರ್ತಾ ಮತ್ತು ಆರೋಗ್ಯ ಇಲಾಖೆ ಕಚೇರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮತದಾನ ನಮ್ಮ ಹಕ್ಕು, ಎಲ್ಲರೂ ಮತದಾನ ಮಾಡಿ,ನಿಮ್ಮ ಮತ ದೇಶಕ್ಕೆ ಹಿತವೆಂಬ ಘೋಷಣೆಗಳೊಂದಿಗೆ ಜಾಥಾ ಏರ್ಪಡಿಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಮಾನವ ಸರಪಳಿಯನ್ನು ನಿರ್ಮಿಸಿ ನಾಗರೀಕರಿಗೆ ಮತದಾನದ ಹಕ್ಕಿನ ಬಗ್ಗೆ ತಿಳಿಸಲಾಯಿತು ಹಾಗೂ ಜಾಥಾದಲ್ಲಿ ಭಾಗವಹಿಸಿದ ಎಲ್ಲರಿಂದ ಪ್ರಮಾಣ ಮಾಡಿಸಲಾಯಿತು.  

ಮತದಾನ ಮಾಡುತ್ತೇವೆ- ಪ್ರತಿಜ್ಞೆ