Monday, April 29, 2013

ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಕಡ್ಡಾಯ-ಹರ್ಷಗುಪ್ತಾ

ಮಂಗಳೂರು, ಎಪ್ರಿಲ್. 29:-ಮೇ 5ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮತದಾನಕ್ಕೆ ಅವಕಾಶ ಎಂದು ದಕ್ಷಿಣಕನ್ನಡ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ  ಹರ್ಷಗುಪ್ತಾ ಅವರು ಸ್ಪಷ್ಟಪಡಿಸಿದ್ದಾರೆ.
        ಅವರು ಇಂದು ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿರುವ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಎಲ್ಲಾ ತರಬೇತಿ ಕೇಂದ್ರಗಳಿಗೆ ಖುದ್ದು ತೆರಳಲು ಸಾಧ್ಯವಾಗದ ಕಾರಣ ವಿವಿಧ ತರಬೇತಿಕೇಂದ್ರಗಳ ಚುನಾವಣಾ ಸಿಬ್ಬಂದಿಗಳನ್ನು ತಮ್ಮ ಕಚೇರಿಯಿಂದಲೇ ವಯರ್ ಲೆಸ್ ಮೂಲಕ ಏಕಕಾಲಕ್ಕೆ ಸಂಪರ್ಕ ಪಡೆದು ಮಾತನಾಡಿದರು.
ಫೋಟೋ ಇರುವ ಎಪಿಕ್ ಕಾರ್ಡ್  ಇದ್ದು,ಅಂತಹವರ ಹೆಸರು ಮತದಾರರ ಪಟ್ಟಿಯಲ್ಲಿ  ಇಲ್ಲದಿದ್ದರೆ ಅವರಿಗೆ ಮತದಾನಕ್ಕೆ ಅವಕಾಶ ನೀಡಬಾರದು.ಮತದಾರರ ಪಟ್ಟಿಯಲ್ಲಿ ಹೆಸರಿದ್ದು,23 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸದ್ದಿದ್ದಲ್ಲಿ, ಅಂತಹವರಿಗೂ ಮತದಾನಕ್ಕೆ ಅವಕಾಶ ನೀಡದಿರಲು ಜಿಲ್ಲಾ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.
ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಸಿಬ್ಬಂದಿಗಳು ನಿರ್ಭೀತಿಯಿಂದ ನ್ಯಾಯಯುತ,ನಿಷ್ಪಕ್ಷಪಾತವಾಗಿ ಹಾಗೂ ಇತರರಿಗೆ ಮಾದರಿಯಾಗುವಂತೆ ತಮ್ಮ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಕರೆ ನೀಡುವ ಮೂಲಕ ಸಿಬ್ಬಂದಿಗಳಲ್ಲಿ ಹುರುಪು ವಿಶ್ವಾಸ ತುಂಬಿದರು.ಜಿಲ್ಲಾಡಳಿತ ಚುನಾವಣಾ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸನ್ನದ್ಧವಾಗಿದೆ.ಆದಕಾರಣ ಸಿಬ್ಬಂದಿಗಳು ಚುನಾವಣೆ ಕಾರ್ಯಕ್ಕೆ ಸಂಬಂಧಿಸಿದ ತಮ್ಮ ದೂರುಗಳನ್ನು ದೂರವಾಣಿ ಸಂಖ್ಯೆ 1077 ಕ್ಕೆ ಕರೆಮಾಡಿ ಸಲ್ಲಿಸಬಹುದಾಗಿದೆ.  ಪೋಲೀಸ್ ,ಅರೆಸೇನಾ ಪಡೆ ಇನ್ನಿತರೆ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿರುವ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಕಾರ್ಯದಲ್ಲಿ  ಯಾವುದೇ ಚುನಾವಣಾ ನೀತಿ ಉಲ್ಲಂಘನೆಯಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ 1077 ಕ್ಕೆ ಪೋನ್ ಮೂಲಕ ತಿಳಿಸಲು ಸೂಚಿಸಿದ್ದಲ್ಲದೆ,ಸಿಬ್ಬಂದಿಗಳು ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ಆತ್ಮವಿಶ್ವಾಸದಿಂದ ಕಾರ್ಯಾಚರಿಸುವಂತೆ ಕರೆ ನೀಡಿದರು. ಚುನಾವಣಾ ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ,ಕುರ್ಚಿಗಳ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿಗಳು,ಮೇ 4 ಹಾಗೂ ಮೇ 5 ರಂದು ಚುನಾವಣಾ ಸಿಬಂದಿಗಳು ಆವಶ್ಯಕತೆ ಇದ್ದರೆ ಊಟ ,ತಿಂಡಿ,ಕಾಫಿ ವ್ಯವಸ್ಥೆ ಮುಂಚಿತವಾಗಿ ಆಯಾ ಮತಗಟ್ಟೆ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಗೆ ತಿಳಿಸಿದಲ್ಲಿ ವ್ಯವಸ್ಥೆಯನ್ನು ಮಾಡಲಿದ್ದು ಇದರ ವೆಚ್ಚವನ್ನು ಸಿಬ್ಬಂದಿಯ ಚುನಾವನಾ ಕಾರ್ಯ ಗೌರವಧನದಲ್ಲಿ ಕಡಿತಗೊಳಿಸಲಾಗುವುದೆಂದರು.ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ದಿನ ಮೇ 4 ರಂದು ಬೆಳಿಗ್ಗೆ 6.30 ಗಂಟೆಗೆ ಸರಿಯಾಗಿ ಮಸ್ಟರಿಂಗ್ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿರಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಂಧ ಮತ್ತು ಅಶಕ್ತ ಮತದಾರರ ಸಹಾಯಕ್ಕಾಗಿ ಜೊತೆಯಲ್ಲಿ ಒಬ್ಬರು ಸಹಾಯಕರನ್ನು ಮತಗಟ್ಟೆಗೆ ಕರೆದೊಯ್ಯಲು ಅವಕಾಶವಿದೆ ಎಂದರು.
ಸಿಬ್ಬಂದಿಗಳಿಗೆ ಮತಗಟ್ಟೆಗಳಲ್ಲಿ ಏನಾದರೂ ಸಣ್ಣಪುಟ್ಟ ಲೋಪಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ಚುನಾವಣಾ ಕಾರ್ಯವನ್ನು ಒಮ್ಮತದಿಂದ ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳ ಜೊತೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.   

No comments: