Sunday, April 7, 2013

ಮುಡಿಪುವಿನಲ್ಲಿ ಸ್ವೀಪ್ ಕಾರ್ಯಕ್ರಮ

ಮಂಗಳೂರು, ಏಪ್ರಿಲ್.07 : ಸಮೂಹ ಮಾಧ್ಯಮಗಳು ತಲುಪದ ಪ್ರದೇಶಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಮತದಾನದ ಬಗ್ಗೆ ಜನರಿಗೆ ನೀಡುವ ಮಾಹಿತಿ ಅತಿ ಅಮೂಲ್ಯವಾದ್ದದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು.
ಅವರಿಂದು ಮುಡಿಪುವಿನ ನವಶಿಕ್ಷಣ, ನವಚೇತನಕೇಂದ್ರದಲ್ಲಿ ಕೊರಗರಿಗಾಗಿ ಹಮ್ಮಿಕೊಂಡಿದ್ದ ಮತದಾನದ ಬಗ್ಗೆಗಿನ ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಿಂದುಳಿದ ಪ್ರದೇಶಗಳ, ಗ್ರಾಮೀಣ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವುದು ನಮ್ಮ ಆದ್ಯ ಕರ್ತವ್ಯ ಎಂದ ಅವರು, ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಎಲ್ಲರೂ ಮತದಾನ ಮಾಡಿ ಎಂದರು. ಗ್ರಾಮೀಣರಿಗೆ ಪ್ರೇರಪಣೆ ನೀಡುವ ಉತ್ತಮ ಕೆಲಸಗಳು ಜಿಲ್ಲೆಯಲ್ಲಿ ನಿರಂತರ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು, ಗ್ರಾಮೀಣ ಪ್ರದೇಶದಲ್ಲಿ ಸ್ವೀಪ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡಿದ್ದು ಸರ್ಕಾರಿ ಆಡಳಿತದೊಂದಿಗೆ ಸರ್ಕಾರೇತರ ಸಂಘ ಸಂಸ್ಥೆಗಳ ನೆರವನ್ನು ಪಡೆಯಲಾಗಿದೆ ಎಂದರು.
ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್, ನರೇಗಾ ಒಂಬಡ್ಸ್ ಮನ್ ಶೀನಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಅವರು ಉಪಸ್ಥಿತರಿದ್ದರು. ಗಿರಿ-ಸಿರಿ ತಂಡದಿಂದ ಕೊರಗರ ಡೋಲು ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
 

No comments: